ಬಾಸ್ ಮೀನು - 
ಪರ್ಸಿಫಾರ್ಮಿಸ್ ಗಣದ ಸೆಂಟ್ರಾರ್ಕಿಡೆ ಮತ್ತು ಸೆರಾನಿಡೆ ಕುಟುಂಬಗಳಿಗೆ ಸೇರಿದ ಹಲವಾರು ಬಗೆಯ ಮೀನುಗಳಿಗಿರುವ ಸಾಮಾನ್ಯ ಹೆಸರು. ಇವುಗಳನ್ನು ಗ್ರೂಪ್ರರ್ಸ್ ಎಂದೂ ಕರೆಯುತ್ತಾರೆ. ಸುಮಾರು 400 ಜಾತಿಯ ಮೀನುಗಳು ಈ ಕುಟುಂಬದಲ್ಲಿವೆ. ಇವುಗಳಲ್ಲಿ ಕೆಲವು ಪ್ರಮುಖ ಆಹಾರ ಮೀನುಗಳೂ ಹೌದು. ಇವುಗಳ ಪೈಕಿ ಮುಖ್ಯವಾದವು: ಪಟ್ಟೆ ಬಾಸ್ (ಸ್ಟ್ರೈಪ್ಡ್ ಬಾಸ್-ರಾಕಸ್ ಸ್ಯಾಕ್ಸಾಟಿಲಿಸ್), ಕಪ್ಪು ಬಾಸ್ (ಬ್ಲಾಕ್ ಸೀ ಬಾಸ್-ಸೆಂಟ್ರೂ ಪ್ರಿಸ್ಟಿಸ್ ಸ್ಟ್ರಯೋಟಸ್,) ಕಿರಿಬಾಯಿಯ ಕಪ್ಪುಬಾಸ್ (ಸ್ಮಾಲ್ ಮೌತ್ ಬ್ಲಾಕ್ ಬಾಸ್-ಮೈಕ್ರಾಪ್ಟಿರಸ್ ಡೋಲೊಮಿಯು) ಹಾಗೂ ಅಗಲ ಬಾಯಿಯ ಕಪ್ಪು ಬಾಸ್ (ಲಾರ್ಜ್ ಮೌತ್ ಬ್ಲಾಕ್ ಬಾಸ್-ಮೈಕ್ರಾಪ್ಟಿರಸ್ ಸಾಲ್ಮಾಯ್ಡಿಸ್). ಮೊದಲನೆಯ ಎರಡು ಮೀನುಗಳು ಸೆರಾನಿಡೀ ಕುಟುಂಬಕ್ಕೆ ಸೇರಿದ್ದು ಉತ್ತರ ಅಮೆರಿಕದ ಪೂರ್ವ ಹಾಗೂ ಪಶ್ಚಿಮ ಕರಾವಳಿಗಳಲ್ಲಿ ಕಾಣ ದೊರೆಯುತ್ತವೆ. ಎರಡೂ ತುಂಬ ಉತ್ತಮ ಖಾದ್ಯ ಮೀನುಗಳೆನಿಸಿವೆ. ಏಡಿ, ಸ್ಕ್ವಿಡ್ ಹಾಗೂ ಇತರ ತೆರನ ಮೀನುಗಳು ಇವುಗಳ ಆಹಾರ. ಇವು ಮರಿಮಾಡುವ ಶ್ರಾಯ ವಸಂತ ಋತು. ಮೊಟ್ಟೆಯಿಡುವ ಕಾಲದಲ್ಲಿ ಸಮುದ್ರದಿಂದ ಅಳಿವೆಗಳ ಮೂಲಕ ಚೌಳು ನೀರಿಗೆ ಇಲ್ಲವೆ ನದಿಗಳಿಗೆ ಬರುತ್ತವೆ. ಪಟ್ಟೆ ಬಾಸ್ ಮೀನು ಚಳಿಗಾಲದಲ್ಲಿ ದಕ್ಷಿಣಕ್ಕೂ ವಸಂತದಲ್ಲಿ ಉತ್ತರಕ್ಕೂ ವಲಸೆ ಹೋಗುತ್ತದೆ. ಕಪ್ಪುಬಾಸ್ ಮೀನಿನಲ್ಲಿ ಹಲವಾರು ಹೆಣ್ಣು ಮೀನುಗಳು ಐದು ವರ್ಷ ವಯಸ್ಸಾದ ತರುವಾಯ ಕ್ರಮೇಣ ಗಂಡು ಮೀನುಗಳಾಗಿ ಪರಿವರ್ತಿತವಾಗುವ ವಿಚಿತ್ರ ಲಕ್ಷಣ ಕಾಣಬಹುದು.

	ಕಿರಿಬಾಯಿಯ ಹಾಗೂ ಅಗಲಬಾಯಿಯ ಕಪ್ಪು ಬಾಸ್‍ಗಳು ಸಿಹಿನೀರು ನಿವಾಸಿಗಳು, ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡಗಳ ಹಲವಾರು ನದೀ ವ್ಯವಸ್ಥೆಗಳಲ್ಲಿ ಇವು ಕಾಣದೊರೆಯುವುವು. ಅಲ್ಲದೆ ಕಿರಿಬಾಯಿಯ ಬಾಸ್ ಮೀನನ್ನು ದಕ್ಷಿಣ ಆಫ್ರಿಕ, ಬ್ರಿಟಿಷ್ ದ್ವೀಪಗಳು ಹಾಗೂ ಯೂರೊಪಿನ ಹಲವಾರು ದೇಶಗಳಿಗೆ ತಂದು ಬೆಳೆಸಲಾಗಿದೆ. ಇದು ಸಾಧಾರಣಗಾತ್ರದ ಮೀನು. ಪ್ರೌಢ ಮೀನಿನ ಉದ್ದ ಸುಮಾರು 25 ಸೆಂಮೀ. ತೂಕ ಸುಮಾರು 1 ಕೆಜಿ. 

	ಇದರ ಸಂತಾನೋತ್ಪತಿಯ ಶ್ರಾಯ ಏಪ್ರಿಲ್-ಜುಲೈ. ಈ ಸಮಯದಲ್ಲಿ ಹಲವಾರು ಗಂಡು ಮೀನುಗಳು 1-2 ಮೀ ಆಳದ ಹಾಗೂ ಕಲ್ಲುಗಳಿಂದ ಕೂಡಿದ ಸ್ಥಳಗಳಲ್ಲಿ ಗುಂಪುಗೂಡುವುವು. ಪ್ರತಿಯೊಂದು ಗಂಡು ತನ್ನದೇ ಆದ ಕ್ಷೇತ್ರ ಸ್ಥಾಪಿಸಿಕೊಂಡು, ಸುಮಾರು 1 ಮೀ ವ್ಯಾಸದ ತಟ್ಟೆ ಗೂಡು ಕಟ್ಟುತ್ತದೆ. ಆಗಿಂದಾಗ್ಗೆ ಅದನ್ನು ಸ್ವಚ್ಛಗೊಳಿಸುವುದೂ ಅದರ ಬಳಿ ಇನ್ನಿತರ ಜಲಚರಿಗಳು ಸುಳಿದಲ್ಲಿ ಅವನ್ನು ಓಡಿಸುವುದೂ ಇತ್ಯಾದಿ ಕಾರ್ಯಗಳಲ್ಲಿ ತೊಡಗಿರುತ್ತದೆ. ಕೊಂಚ ಸಮಯದಲ್ಲಿ ಗೂಡಿಗೆ ಹಲವಾರು ಹೆಣ್ಣು ಮೀನುಗಳು ಬರುವುವು. ಅವುಗಳ ಪೈಕಿ ಯಾವುದಾದರೂ ಒಂದು ಗೂಡಿನೊಳಕ್ಕೆ ನುಗ್ಗಿ ತಳದಲ್ಲಿಯ ಕಲ್ಲುಗಳಿಗೆ ತನ್ನ ಮೊಟ್ಟೆಗಳನ್ನು ಅಂಟಿಸಿ ಹೊರಟುಹೋಗುವುದು. ಅನಂತರ ಮೊಟ್ಟೆಗಳ ಹಾಗೂ ಅವುಗಳಿಂದ ಹೊರಬರುವ ಮರಿಗಳ ರಕ್ಷಣೆಯ ಕಾರ್ಯವನ್ನು ಗಂಡು ನಿರ್ವಹಿಸುತ್ತದೆ. ತುಂಬ ಚುರುಕಾಗಿ ಈ ಕೆಲಸ ನೋಡಿಕೊಳ್ಳುವ ಗಂಡು ಆಗಿಂದಾಗ್ಗೆ ಮೊಟ್ಟೆಗಳ ಮೇಲೆ ತನ್ನ ಈಜು ರೆಕ್ಕೆಗಳನ್ನು ಬಡಿಯುತ್ತ, ಇನ್ನಿತರ ಪ್ರಾಣಿಗಳು ಬಂದರೆ ಓಡಿಸುತ್ತ ಸುಮಾರು 15-20 ದಿನ ಪರ್ಯಂತ ಅವಕ್ಕೆ ಕಾಪಿರುತ್ತದೆ. ಇದೇ ರೀತಿಯ ಮೊಟ್ಟೆ ಮರಿಗಳ ರಕ್ಷಣೆಯ ಪರಿಪಾಟಿಯನ್ನು ಅಗಲಬಾಯಿಯ ಕಪ್ಪು ಬಾಸ್ ಮೀನಿನಲ್ಲಿಯೂ ಕಾಣಬಹುದು.

ಇವೆರಡು ಕಪ್ಪು ಬಾಸ್ ಮೀನುಗಳೂ ಮರಿಗಳಾಗುವಾಗ ನೀರುಚಿಗಟ ಮುಂತಾದ ಸಣ್ಣ ಪುಟ್ಟ ಕಠಿಣಚರ್ಮಿಗಳನ್ನು ತಿನ್ನುತ್ತವೆ. ವಯಸ್ಕಗಳಾದ ಮೇಲೆ ಇನ್ನಿತರ ಮೀನುಗಳು, ಕೆಲವೊಮ್ಮೆ ಸಣ್ಣಗಾತ್ರದ ಹಕ್ಕಿಗಳು ಇವುಗಳ ಪ್ರಧಾನ ಆಹಾರವಾಗಿರುತ್ತವೆ.
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ